ಬೆಂಗಳೂರು ಸುರಂಗ ರಸ್ತೆ ಯೋಜನೆ ವಿರುದ್ಧ ತೇಜಸ್ವಿ ಸೂರ್ಯ ಪಿಐಎಲ್

ಬೆಂಗಳೂರು: ಬೆಂಗಳೂರಿನ ಉತ್ತರ-ದಕ್ಷಿಣ ಸುರಂಗ ರಸ್ತೆ ಯೋಜನೆಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿರುವುದಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಅರ್ಜಿಯನ್ನು ಸೋಮವಾರ ಸಲ್ಲಿಸಲಾಗಿದ್ದು, ಜುಲೈ 6ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿದೆ ಎಂದು ಹೇಳಿದ್ದಾರೆ.

“ಈ ವಿಷಯವು ದಿನದ ಕಲಾಪದಲ್ಲಿ ಕೈಗೆತ್ತಿಕೊಳ್ಳುವ ಸಾಧ್ಯತೆ ಕಡಿಮೆ ಇದ್ದ ಕಾರಣ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಲ್ಲಿ ಸಮಯ ಕೋರಿದ್ದೆ. ಅವರು ಜುಲೈ 6, 2026ರಂದು ವಿಚಾರಣೆಗೆ ನಿಗದಿಪಡಿಸಿದ್ದಾರೆ” ಎಂದು ತೇಜಸ್ವಿ ಸೂರ್ಯ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೇಖ್ರಿ ವೃತ್ತ ಮತ್ತು ಹೆಬ್ಬಾಳ ನಡುವಿನ 2.5 ಕಿಲೋಮೀಟರ್ ಉದ್ದದ ಸುರಂಗ ರಸ್ತೆ ಯೋಜನೆಗೆ ಅಡಿಪಾಯ ಹಾಕಿದ ಒಂದು ದಿನದ ಬಳಿಕ ಈ ಪಿಐಎಲ್ ಸಲ್ಲಿಕೆಯಾಗಿದೆ.

ಈ ಸುರಂಗ ರಸ್ತೆಗೆ ಯಾವುದೇ ಟೋಲ್ ವಿಧಿಸಲಾಗುವುದಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನದೇ ಸಂಪನ್ಮೂಲಗಳಿಂದ ಯೋಜನೆಯನ್ನು ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಹೆಬ್ಬಾಳ ಬೆಂಗಳೂರಿನ ಪ್ರಮುಖ ಪ್ರವೇಶ ದ್ವಾರವಾಗಿದ್ದು, ಈ ಯೋಜನೆಯಿಂದ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಸರ್ಕಾರ ಮುಂದಿನ 50 ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಇದೀಗ ಯೋಜನೆ ವಿರುದ್ಧ ಸಲ್ಲಿಕೆಯಾಗಿರುವ ಪಿಐಎಲ್ ಕುರಿತು ಜುಲೈ 6ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.

Leave a Reply

Your email address will not be published. Required fields are marked *