ಸುಳ್ಳು ಲೈಂಗಿಕ ಕಿರುಕುಳ ಆರೋಪ; ಶಿಲ್ಪಾ ಶಿಂಧೆಗೆ ಸವಾಲು

ಮುಂಬೈ: ‘ಭಾಬಿಜಿ ಘರ್ ಪರ್ ಹೈ!’ ಖ್ಯಾತಿಯ ನಟಿ ಶಿಲ್ಪಾ ಶಿಂಧೆ, 2016ರಲ್ಲಿ ನಿರ್ಮಾಪಕರ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳದ ಆರೋಪ ಸುಳ್ಳಾಗಿತ್ತು ಎಂದು ಇತ್ತೀಚೆಗೆ ಒಪ್ಪಿಕೊಂಡಿದ್ದಾರೆ ಎಂಬ ಬೆಳವಣಿಗೆ ಹೊಸ ವಿವಾದಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಶಿಲ್ಪಾ, ಪಾಡ್‌ಕಾಸ್ಟ್‌ನ ಒಂದು ಭಾಗವನ್ನು ಮಾತ್ರ ನೋಡಿ ತಮ್ಮನ್ನು ಟೀಕಿಸಲಾಗುತ್ತಿದೆ ಎಂದು ಹೇಳಿದ್ದಾರೆ. “ಸಂಪೂರ್ಣ ಸಂದರ್ಶನವನ್ನು ನೋಡದೇ ತೀರ್ಪು ನೀಡುವುದು ಸರಿಯಲ್ಲ,” ಎಂದು ಅವರು ಹೇಳಿದ್ದಾರೆ.

ಆ ಸಮಯದಲ್ಲಿ ತೀವ್ರ ಮಾನಸಿಕ ಒತ್ತಡದಲ್ಲಿದ್ದೆ ಎಂದು ಹೇಳಿದ ಶಿಲ್ಪಾ, “ಆ ಸುಳ್ಳಿನೊಂದಿಗೆ ಬದುಕಲು ಸಾಧ್ಯವಾಗಲಿಲ್ಲ. ಒಂದು ದಿನ ಸತ್ಯ ಹೇಳಲೇಬೇಕಿತ್ತು,” ಎಂದು ತಿಳಿಸಿದ್ದಾರೆ. ತಮ್ಮ ಆರೋಪದಿಂದ ನಿರ್ಮಾಪಕರಿಗೆ ಉಂಟಾದ ನೋವಿನ ಬಗ್ಗೆ ವಿಷಾದ ವ್ಯಕ್ತಪಡಿಸಿ, “ಕ್ಷಮಿಸಿ ಎಂಬ ಪದ ಸಾಕಾಗುವುದಿಲ್ಲ, ಆದರೆ ಆ ಸಂದರ್ಭದ ನನ್ನ ಪರಿಸ್ಥಿತಿ ಅವರಿಗೆ ತಿಳಿದಿದೆ,” ಎಂದಿದ್ದಾರೆ.

ಇದರ ನಡುವೆ, ಸಾಮಾಜಿಕ ಜಾಲತಾಣ ಬಳಕೆದಾರರು ಮತ್ತು ಕೆಲವು ಪುರುಷರ ಹಕ್ಕುಗಳ ಪರ ಸಂಘಟನೆಗಳು ಶಿಲ್ಪಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ. ಸುಳ್ಳು ಆರೋಪದ ಮೂಲಕ ಒಬ್ಬರ ಪ್ರತಿಷ್ಠೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಇತ್ತೀಚೆಗೆ ಭಾರತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಶಿಲ್ಪಾ ಶಿಂಧೆ, “ಅದು ಸುಳ್ಳು ಆರೋಪವಾಗಿತ್ತು” ಎಂದು ಬಹಿರಂಗವಾಗಿ ಹೇಳಿದ್ದಾರೆ ಎಂಬ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Leave a Reply

Your email address will not be published. Required fields are marked *