‘ಐಡಿ ಇಲ್ಲದೆ ಪಬ್‌, ಬಾರ್ ಪ್ರವೇಶವಿಲ್ಲ’ ಅಪ್ರಾಪ್ತರ ಮದ್ಯಪಾನ ತಡೆಗೆ ಗೃಹ ಸಚಿವರ ಖಡಕ್ ಸೂಚನೆ

ಬೆಂಗಳೂರು: ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೆಂಗಳೂರಿನ ಎಲ್ಲಾ ಪಬ್‌ಗಳು, ಬಾರ್‌ಗಳು, ಕ್ಲಬ್‌ಗಳು, ಬ್ರೂವರೀಸ್‌, ಲಾಂಜ್‌ಗಳು ಹಾಗೂ ಮದ್ಯ ಸರಬರಾಜು ಮಾಡುವ ಸಂಸ್ಥೆಗಳಲ್ಲಿ ವಯಸ್ಸಿನ ಪರಿಶೀಲನೆಯನ್ನು ಕಡ್ಡಾಯಗೊಳಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

ಮಾನ್ಯ ಗುರುತಿನ ಚೀಟಿ ಇಲ್ಲದವರಿಗೆ ಪ್ರವೇಶ ನೀಡಬಾರದು ಮತ್ತು ಅಪ್ರಾಪ್ತ ವಯಸ್ಕರಿಗೆ ಮದ್ಯ ಪೂರೈಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಪ್ರವೇಶ ದ್ವಾರಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕು. ಅದರ ದೃಶ್ಯಾವಳಿಗಳನ್ನು ಸಂರಕ್ಷಿಸುವ ಜವಾಬ್ದಾರಿ ಸಂಸ್ಥೆಗಳ ಮಾಲೀಕರು, ವ್ಯವಸ್ಥಾಪಕರು ಮತ್ತು ಪರವಾನಗಿದಾರರ ಮೇಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಕ್ರೈಸ್ಟ್ ವಿಶ್ವವಿದ್ಯಾಲಯ ಮತ್ತು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ನಡೆಸಿದ ಅಧ್ಯಯನದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ 4,093 ವಿದ್ಯಾರ್ಥಿಗಳನ್ನು ಒಳಗೊಂಡ ಸಮೀಕ್ಷೆಯಲ್ಲಿ ಸುಮಾರು ಶೇ.33ರಷ್ಟು ವಿದ್ಯಾರ್ಥಿಗಳು ಮದ್ಯಪಾನಕ್ಕೆ ಸಂಬಂಧಿಸಿದ ಅಪಾಯದಲ್ಲಿದ್ದಾರೆ ಹಾಗೂ ಶೇ.18ರಷ್ಟು ಮಂದಿ ತಂಬಾಕು ಬಳಕೆಗೆ ಒಳಗಾಗಿದ್ದಾರೆ ಎಂದು ವರದಿ ತಿಳಿಸಿದೆ.

ಕೆಲವು ಮಕ್ಕಳು ಅತಿ ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳಿಗೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಖರ್ಗೆ ಹೇಳಿದ್ದಾರೆ.

“ವಾಣಿಜ್ಯ ಲಾಭಕ್ಕಾಗಿ ಮಕ್ಕಳ ಸುರಕ್ಷತೆ ಮತ್ತು ಭವಿಷ್ಯವನ್ನು ಕಡೆಗಣಿಸಲು ಸಾಧ್ಯವಿಲ್ಲ. ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡುವುದು ಅಪರಾಧ. ಕರ್ನಾಟಕ ಸರ್ಕಾರ ಇದನ್ನು ತಡೆಯಲು ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಲಿದೆ” ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *