ಬಿಪಿಎಲ್ ಕಾರ್ಡ್ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಳ: ಯಾವುದೇ ಬಿಪಿಎಲ್ ಕಾರ್ಡ್ ರದ್ದು ಇಲ್ಲ

ಬೆಂಗಳೂರು: ಬಿಪಿಎಲ್ ಕಾರ್ಡ್ ಪಡೆಯಲು ನಿಗದಿಪಡಿಸಿರುವ ವಾರ್ಷಿಕ ಆದಾಯದ ಮಿತಿಯನ್ನು ₹1.20 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಪಡಿತರ ಕಾರ್ಡ್‌ಗಳ ಪರಿಶೀಲನೆ ನಡೆಯುತ್ತಿದ್ದು, ಯಾವುದೇ ಬಿಪಿಎಲ್ ಕಾರ್ಡ್ ರದ್ದುಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅನರ್ಹ ಕಾರ್ಡ್‌ಗಳನ್ನು ಮಾತ್ರ ಎಪಿಎಲ್‌ಗೆ ವರ್ಗಾಯಿಸಲಾಗುವುದು ಎಂದರು.

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯಡಿ 4.42 ಕೋಟಿ ಫಲಾನುಭವಿಗಳಿಗೆ 10 ಕೆಜಿ ಪಡಿತರ ವಿತರಿಸಲಾಗುತ್ತಿದೆ ಎಂದು ತಿಳಿಸಿದ ಸಚಿವರು, ಕಾಳಸಂತೆಯನ್ನು ತಡೆಯಲು ಗೋದಾಮುಗಳಲ್ಲಿ ಸಿಸಿಟಿವಿ ಹಾಗೂ ಪಡಿತರ ಸಾಗಣೆ ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದೆ ಎಂದರು. ಅಕ್ರಮ ತಡೆಗಾಗಿ 1,497 ಎಫ್‌ಐಆರ್‌ ದಾಖಲಿಸಿ, ಸುಮಾರು ₹50 ಕೋಟಿ ಮೌಲ್ಯದ ಪಡಿತರ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಎಂಎಸ್‌ಪಿ ಯೋಜನೆಯಡಿ 5.60 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸಿ ವಿತರಣೆ ಮಾಡಲಾಗುತ್ತಿದ್ದು, ಇಂದಿರಾ ಕಿಟ್ ವಿತರಣೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಸುಮಾರು ₹6,000 ಕೋಟಿ ವೆಚ್ಚದ ಈ ಯೋಜನೆ ಮುಂದಿನ ಎರಡು ತಿಂಗಳಲ್ಲಿ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ 20,259 ನ್ಯಾಯಬೆಲೆ ಅಂಗಡಿಗಳಲ್ಲಿ ಗ್ಯಾರಂಟಿ ಯೋಜನೆಗಳ ಮಾಹಿತಿ ಫಲಕ ಅಳವಡಿಸುವ ಕುರಿತು ಚರ್ಚೆ ನಡೆದಿದ್ದು, ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ಯಾವುದೇ ಸಮಸ್ಯೆಗಳಿದ್ದರೆ 1967 ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದು ಸಚಿವರು ತಿಳಿಸಿದರು.

Leave a Reply

Your email address will not be published. Required fields are marked *