ಆಗಸ್ಟ್‌ 1ರಂದು ರಾಜ್ಯಕ್ಕೆ ಪ್ರಧಾನಿ ಮೋದಿ; ಮೈಸೂರಿನಲ್ಲಿ ವಿವೇಕಾನಂದ ಸ್ಮಾರಕ ಲೋಕಾರ್ಪಣೆ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 1ರಂದು ಮೈಸೂರಿಗೆ ಭೇಟಿ ನೀಡಿ, ₹45 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸ್ವಾಮಿ ವಿವೇಕಾನಂದ ಸ್ಮಾರಕ ಹಾಗೂ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ದೇವರಾಜ ಮೊಹಲ್ಲಾದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಈ ಸ್ಮಾರಕವು, ಸ್ವಾಮಿ ವಿವೇಕಾನಂದರು ತಂಗಿದ್ದ ಐತಿಹಾಸಿಕ ಸ್ಥಳದಲ್ಲಿ ನಿರ್ಮಾಣಗೊಂಡಿದ್ದು, ಯುವಜನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದೆ.

ಉದ್ಘಾಟನೆಯ ಬಳಿಕ ಪ್ರಧಾನಿ ಮೋದಿ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ, ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ಬಳಿಕ ಆಶ್ರಮದ ಸಭಾಂಗಣದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ  ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸುಮಾರು 6 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ವಿಶೇಷ ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಜೀ ಮಹಾರಾಜ್ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರೊಂದಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಸಂಸದ ಯದುವೀರ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಾಸಕ ಹರೀಶ್ ಗೌಡ ಮೊದಲಾದವರು  ವೇದಿಕೆ ಹಂಚಿಕೊಳ್ಳಲಿದ್ದಾರೆ. ವೇದಿಕೆಯಲ್ಲಿ ಕೆಲವೇ ಗಣ್ಯರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *