ಕಾವೇರಿ ನೀರಾವರಿ ನಿಗಮ ಸಭೆ: ಮೇಕೆದಾಟು ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧೋಕಾರಿಗಳಿಗೆ ಸೂಚನೆ

ಬೆಂಗಳೂರು: ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿರುವ ನೀರಾವರಿ ಯೋಜನೆಗಳು ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಎಸಿ ಕೊಠಡಿಯಲ್ಲಿ ಕುಳಿತು ಲೆಕ್ಕಾಚಾರ ಹಾಕುವ ಬದಲು ಫೀಲ್ಡ್‌ಗೆ ತೆರಳಿ ರೈತರ ಸಮಸ್ಯೆಗಳನ್ನು ಆಲಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದರು.

ಬೆಂಗಳೂರಿನ ಕೃಷ್ಣಾ ಭಾಗ್ಯ ಜಲ ನಿಗಮದ ಸಭಾಂಗಣದಲ್ಲಿ ಕಾವೇರಿ ನೀರಾವರಿ ನಿಗಮದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಡ್ಯಾಂಗಳ ನಿರ್ವಹಣೆಗೆ ಆದ್ಯತೆ

ರಾಜ್ಯದ ಜಲಾಶಯಗಳಲ್ಲಿನ ನೀರಿನ ಮಟ್ಟ, ಡೆಡ್ ಸ್ಟೋರೇಜ್, ತಮಿಳುನಾಡಿಗೆ ಹರಿಸಿದ ನೀರು, ಬಿಳಿಗುಂಡ್ಲುವಿನಲ್ಲಿ ದಾಖಲಾಗಿರುವ ಪ್ರಮಾಣ ಹಾಗೂ ಅಚ್ಚುಕಟ್ಟು ಪ್ರದೇಶದ ಪರಿಸ್ಥಿತಿಯ ಸಂಪೂರ್ಣ ಮಾಹಿತಿಯನ್ನು ದಿನಕ್ಕೆ ಎರಡು ಬಾರಿ ಕಡ್ಡಾಯವಾಗಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬೇಸಿಗೆ ಮುಗಿಯುವವರೆಗೆ ಕುಡಿಯುವ ನೀರಿಗೆ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನಿಗಮದ ವ್ಯಾಪ್ತಿಯ 23 ಸಣ್ಣ ಅಣೆಕಟ್ಟುಗಳ ಪೈಕಿ ಮಂದಗೆರೆ ಹಾಗೂ ಹೇಮಗಿರಿ ಅಣೆಕಟ್ಟುಗಳು ಅತ್ಯಂತ ಹಳೆಯವಾಗಿದ್ದು, ಶಿಥಿಲಾವಸ್ಥೆಯಲ್ಲಿವೆ. ಅವುಗಳ ದುರಸ್ತಿಗೆ ತಕ್ಷಣ ಅಂದಾಜು ಪಟ್ಟಿ ಸಿದ್ಧಪಡಿಸಿ ನೀರಿನ ಸೋರಿಕೆ ತಡೆಯಬೇಕು ಎಂದರು.

ಹೇಮಾವತಿ ನೀರನ್ನು ಕುಣಿಗಲ್ ಮಾರ್ಗವಾಗಿ ಹುಲಿಯೂರುದುರ್ಗದವರೆಗೆ ಹರಿಸಲು ಬಾಕಿ ಇರುವ 32 ಕಿ.ಮೀ. ಕಾಮಗಾರಿಯನ್ನೂ ಶೀಘ್ರ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

 

ಮೇಕೆದಾಟು ಯೋಜನೆ ತ್ವರಿತಗತಿಗೆ

ಕಳೆದ ಐದು ವರ್ಷಗಳಲ್ಲಿ ಸುಮಾರು 112.88 ಟಿಎಂಸಿ ಹೆಚ್ಚುವರಿ ಕಾವೇರಿ ನೀರು ಸಮುದ್ರ ಪಾಲಾಗಿದೆ. ಬರಗಾಲದ ಸಂದರ್ಭದಲ್ಲೂ ಕರ್ನಾಟಕ ಮತ್ತು ತಮಿಳುನಾಡಿಗೆ ಅನುಕೂಲವಾಗುವಂತೆ ನೀರು ನಿರ್ವಹಣೆ ಮಾಡಲು ಹಾಗೂ ಕನಿಷ್ಠ 22 ಟಿಎಂಸಿ ಕುಡಿಯುವ ನೀರು ಸಂಗ್ರಹಿಸಲು ಮೇಕೆದಾಟು ಯೋಜನೆ ಅಗತ್ಯವಾಗಿದೆ ಎಂದು ಸಚಿವರು ಹೇಳಿದರು.

ತಮಿಳುನಾಡು ಕೇಳಿದ್ದ ನೀರಿನ ಹರಿವಿನ ಕುರಿತ ಪ್ರಶ್ನೆಗಳಿಗೆ ಎಸ್‌ಒಪಿ ಕಳುಹಿಸುವ ಮೂಲಕ ಸ್ಪಷ್ಟನೆ ನೀಡಲಾಗಿದ್ದು, ಗೊಂದಲ ಬಗೆಹರಿದಿದೆ. ಕೇಂದ್ರ ಜಲ ಆಯೋಗವೂ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ, ರಾಜ್ಯದ ಸಂಸದರ ಸಹಕಾರದೊಂದಿಗೆ ಪ್ರಧಾನಮಂತ್ರಿಗಳಿಗೆ ಮೇಕೆದಾಟು ಯೋಜನೆಯ ಪ್ರಯೋಜನಗಳನ್ನು ಮನವರಿಕೆ ಮಾಡಿಕೊಡಲಾಗುವುದು. ಮುಳುಗಡೆಯಾಗುವ ಪ್ರದೇಶಕ್ಕೆ ಪರ್ಯಾಯ ಭೂಮಿ ದೊರೆತ ತಕ್ಷಣ ಕಾಮಗಾರಿ ಆರಂಭಿಸಿ ಮೂರು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಯೋಜನೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ತಕ್ಷಣ ಡಿಜಿಟಲೀಕರಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರಿಗೆ ಸಮಾನ ಅನುದಾನ

ಅಭಿವೃದ್ಧಿ ಕಾಮಗಾರಿಗಳಲ್ಲಿ ತಾರತಮ್ಯ ನಿವಾರಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಶಾಸಕರಿಗೂ ರಾಜಕೀಯ ಒತ್ತಡಕ್ಕೆ ಮಣಿಯದೆ ತಲಾ ಎರಡರಿಂದ ಮೂರು ನೀರಾವರಿ ಕಾಮಗಾರಿಗಳನ್ನು ಸಮಾನವಾಗಿ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಹಾರಂಗಿ ಮತ್ತು ಕಬಿನಿ ವ್ಯಾಪ್ತಿಯ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಶ್ರೀರಂಗ ಏತ ನೀರಾವರಿ ಯೋಜನೆಗೆ ಈಗಾಗಲೇ ಖರ್ಚಾಗಿರುವ ಹಣ ಸದ್ಬಳಕೆಯಾಗುವಂತೆ ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ಶೀಘ್ರ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಜನಪ್ರತಿನಿಧಿಗಳೊಂದಿಗೆ ಸೌಹಾರ್ದಯುತವಾಗಿ ಚರ್ಚಿಸಿ ಯೋಜನೆಗಳ ಮಹತ್ವ ವಿವರಿಸಬೇಕು. ರಾಜಕೀಯ ಒತ್ತಡದಿಂದ ಯಾವುದೇ ಯೋಜನೆ ಸ್ಥಗಿತಗೊಳ್ಳಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೆರೆ ತುಂಬಿಸಲು ಪೊಲೀಸ್ ಭದ್ರತೆ

ಒಟ್ಟು ಲಭ್ಯವಿರುವ ನೀರಿನ ಶೇ.20ರಷ್ಟನ್ನು ಕುಡಿಯುವ ನೀರಿಗಾಗಿ ಕಾಯ್ದಿರಿಸಬೇಕು. ತುಮಕೂರು, ಬಸರಾಳು ಮತ್ತು ನಾಗಮಂಗಲ ಭಾಗದ ಕೆರೆಗಳಿಗೆ ಮೂರು ದಿನಕ್ಕೊಮ್ಮೆ ನೀರು ಹರಿಸಬೇಕು. ಅಗತ್ಯವಿದ್ದರೆ ಪೊಲೀಸ್ ಭದ್ರತೆಯಲ್ಲಾದರೂ ಕೆರೆ-ಕಟ್ಟೆಗಳನ್ನು ತುಂಬಿಸುವಂತೆ ಸೂಚಿಸಿದರು.

ಡ್ಯಾಂಗಳ ಪುನಶ್ಚೇತನ ಹಾಗೂ ಅಗತ್ಯ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಸಂಬಂಧ ಆರ್ಥಿಕ ಇಲಾಖೆಯೊಂದಿಗೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ನಿಗಮದಲ್ಲಿ ಖಾಲಿ ಇರುವ ಶೇ.57ರಷ್ಟು ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವುದಾಗಿ ತಿಳಿಸಿದ ಸಚಿವರು, ಎಲ್ಲ ಜಲ ನಿಗಮಗಳನ್ನು ಒಳಗೊಂಡಂತೆ ಜಲಸಂಪನ್ಮೂಲ ಸಚಿವರ ನಿಯಂತ್ರಣದಲ್ಲಿ ಕಮಿಷನರೇಟ್ ರಚಿಸುವ ಅಧಿಕಾರಿಗಳ ಪ್ರಸ್ತಾವನೆಗೂ ಸಮ್ಮತಿ ಸೂಚಿಸಿದರು.

11 ಜಿಲ್ಲೆಗಳಲ್ಲಿ 34,273 ಚದರ ಕಿ.ಮೀ. ವ್ಯಾಪ್ತಿ

ಕಾವೇರಿ ಜಲಾನಯನ ಪ್ರದೇಶವು 11 ಜಿಲ್ಲೆಗಳಲ್ಲಿ 34,273 ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. ನ್ಯಾಯಾಧಿಕರಣದ ತೀರ್ಪಿನಂತೆ 18.85 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವ ಗುರಿ ಹೊಂದಲಾಗಿದೆ. ಇದರಲ್ಲಿ ಬೃಹತ್ ಮತ್ತು ಮಧ್ಯಮ ನೀರಾವರಿಯಡಿ 15.55 ಲಕ್ಷ ಎಕರೆ ಹಾಗೂ ಸಣ್ಣ ನೀರಾವರಿಯಡಿ 3.30 ಲಕ್ಷ ಎಕರೆ ಪ್ರದೇಶ ಸೇರಿದೆ.

ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು, ಆಧುನೀಕರಣ ಮತ್ತು ನಿರ್ವಹಣೆ ಮಾಡುವುದು ಕಾವೇರಿ ನೀರಾವರಿ ನಿಗಮದ ಪ್ರಮುಖ ಉದ್ದೇಶವಾಗಿದೆ. ಮುಖ್ಯಮಂತ್ರಿ ಹಾಗೂ ತಾವು ಕಾವೇರಿ ಜಲಾನಯನ ಪ್ರದೇಶದವರಾಗಿರುವುದರಿಂದ ಯಾವುದೇ ಕಾಮಗಾರಿಗಳು ಅಪೂರ್ಣವಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಕುಲಕರ್ಣಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಸೇರಿದಂತೆ ನಿಗಮದ ಹಿರಿಯ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *