ಡೀಸೆಲ್ ದರ ಏರಿಕೆ: ಬಸ್ ಟಿಕೆಟ್ ದರ ಹೆಚ್ಚಳಕ್ಕೆ ನಾಲ್ಕು ಸಾರಿಗೆ ನಿಗಮಗಳ ಮನವಿ

ಬೆಂಗಳೂರು: ಡೀಸೆಲ್ ದರ ಏರಿಕೆ ಮತ್ತು ಹೆಚ್ಚುತ್ತಿರುವ ಆರ್ಥಿಕ ಹೊರೆಯಿಂದ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳು ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರದ ಅನುಮತಿ ಕೋರಿವೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿ ನಿಗಮಗಳು ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿಯಲ್ಲಿ, ಡೀಸೆಲ್ ದರ ಪ್ರತಿ ಲೀಟರ್‌ಗೆ ಸುಮಾರು ₹8 ಏರಿಕೆಯಾಗಿರುವುದರಿಂದ ತಿಂಗಳಿಗೆ ₹40 ಕೋಟಿ ಮತ್ತು ವಾರ್ಷಿಕವಾಗಿ ಸುಮಾರು ₹480 ಕೋಟಿ ಹೆಚ್ಚುವರಿ ನಷ್ಟ ಉಂಟಾಗುತ್ತಿದೆ ಎಂದು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಶೇ.25ರಷ್ಟು ಟಿಕೆಟ್ ದರ ಹೆಚ್ಚಳ ಅಗತ್ಯವೆಂದು ವಾದಿಸಿವೆ.

ನಿಗಮಗಳು ಈಗಾಗಲೇ ಹಲವು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿವೆ. ಜುಲೈಯಿಂದ ಸಾರಿಗೆ ನೌಕರರಿಗೆ ಶೇ.12.5ರಷ್ಟು ವೇತನ ಹೆಚ್ಚಳ ಜಾರಿಯಾಗಲಿದ್ದು, ₹1,271 ಕೋಟಿ ವೇತನ ಬಾಕಿಯಲ್ಲಿ ಇನ್ನೂ ₹821 ಕೋಟಿ ಪಾವತಿಯಾಗಬೇಕಿದೆ. ಜೊತೆಗೆ, ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಸುಮಾರು ₹5,000 ಕೋಟಿ ಅನುದಾನ ಬಾಕಿಯಿದೆ. ಈ ಎಲ್ಲ ಕಾರಣಗಳಿಂದ ನಿಗಮಗಳ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಟಿಕೆಟ್ ದರ ಏರಿಕೆ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಕಳೆದ ವರ್ಷ ಜನವರಿಯಲ್ಲಿ ಶೇ.15ರಷ್ಟು ದರ ಹೆಚ್ಚಳ ಮಾಡಿದ್ದ ಹಿನ್ನೆಲೆಯಲ್ಲಿ ಮತ್ತೆ ಟಿಕೆಟ್ ದರ ಏರಿಕೆಗೆ ಪ್ರಯಾಣಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲವರು ಶಕ್ತಿ ಯೋಜನೆಯ ಫಲಾನುಭವಿಗಳಿಂದ ಭಾಗಶಃ ಶುಲ್ಕ ವಸೂಲಿ ಮಾಡುವುದನ್ನು ಪರ್ಯಾಯವಾಗಿ ಪರಿಗಣಿಸಬಹುದು ಎಂದು ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *