ಬ್ರಿಕ್ಸ್‌ನ ಎರಡು ದಶಕಗಳ ಪಯಣಕ್ಕೆ ಸಾಕ್ಷಿಯಾದ ಅಂಚೆ ಚೀಟಿ

ನವದೆಹಲಿ: ನವದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಬ್ರಿಕ್ಸ್ ಸಹಕಾರದ ಎರಡು ದಶಕಗಳ ಪಯಣವನ್ನು ಗುರುತಿಸುವ ಎರಡು ಸ್ಮರಣಾರ್ಥ ಅಂಚೆ ಚೀಟಿಗಳನ್ನು ಶನಿವಾರ ಬಿಡುಗಡೆ ಮಾಡಲಾಯಿತು.

‘ಬ್ರಿಕ್ಸ್: ಸಹಕಾರದ ಎರಡು ದಶಕಗಳು, 2006–2026’ ಎಂಬ ಬರಹ ಹಾಗೂ ಅದರ ಹಿಂದಿ ಆವೃತ್ತಿಯನ್ನು ಒಳಗೊಂಡಿರುವ ಅಂಚೆ ಚೀಟಿಗಳು, ಉದಯೋನ್ಮುಖ ಆರ್ಥಿಕತೆಗಳ ನಡುವೆ ಸಂವಾದ, ಸಹಕಾರ ಮತ್ತು ಸಮನ್ವಯಕ್ಕೆ ಪ್ರಮುಖ ವೇದಿಕೆಯಾಗಿ ಬ್ರಿಕ್ಸ್ ಬೆಳೆದಿರುವುದನ್ನು ಬಿಂಬಿಸುತ್ತವೆ.

ಭಾರತದ 2026ರ ಬ್ರಿಕ್ಸ್ ಅಧ್ಯಕ್ಷತೆಯ ‘ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ’ ಎಂಬ ಧ್ಯೇಯವನ್ನೂ ಈ ಅಂಚೆ ಚೀಟಿಗಳು ಪ್ರತಿಬಿಂಬಿಸುತ್ತವೆ.

ಮೊದಲ ಅಂಚೆ ಚೀಟಿಯು ಸದಸ್ಯ ರಾಷ್ಟ್ರಗಳ ನಡುವಿನ ಪರಸ್ಪರ ಗೌರವ, ತಿಳುವಳಿಕೆ ಮತ್ತು ಒಗ್ಗಟ್ಟಿನ ಆಧಾರದ ಮೇಲೆ ಬ್ರಿಕ್ಸ್ ಬೆಳೆದಿರುವುದನ್ನು ಪ್ರತಿನಿಧಿಸುತ್ತದೆ. ಎರಡನೇ ಅಂಚೆ ಚೀಟಿಯಲ್ಲಿ ಬ್ರಿಕ್ಸ್ ಲಾಂಛನವನ್ನು ಒಳಗೊಂಡಿದ್ದು, ಭಾರತದ ಅಧ್ಯಕ್ಷತೆಯ ‘ಮಾನವೀಯತೆಗೆ ಆದ್ಯತೆ’ ಮತ್ತು ಜನಕೇಂದ್ರಿತ ದೃಷ್ಟಿಕೋನವನ್ನು ಬಿಂಬಿಸಲಾಗಿದೆ.

2006ರಲ್ಲಿ ಸ್ಥಾಪನೆಯಾದ ಬ್ರಿಕ್ಸ್ ಎರಡು ದಶಕಗಳಲ್ಲಿ ಆರ್ಥಿಕ ಅಭಿವೃದ್ಧಿ, ವ್ಯಾಪಾರ, ಹಣಕಾಸು, ತಂತ್ರಜ್ಞಾನ ಹಾಗೂ ಜಾಗತಿಕ ಆಡಳಿತ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರದ ಪ್ರಮುಖ ವೇದಿಕೆಯಾಗಿ ವಿಕಸನಗೊಂಡಿದೆ.

ಸ್ಮರಣಾರ್ಥ ಅಂಚೆ ಚೀಟಿಗಳು ಬ್ರಿಕ್ಸ್‌ನ ಕಳೆದ 20 ವರ್ಷಗಳ ಪಯಣದ ಜತೆಗೆ, ಭವಿಷ್ಯದ ಸಹಕಾರಕ್ಕೆ ಅಗತ್ಯವಾದ ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಯ ಮಹತ್ವವನ್ನೂ ಸಾರುತ್ತವೆ.

Leave a Reply

Your email address will not be published. Required fields are marked *