ರೈತರಿಗೆ ಶೂನ್ಯ ಬಡ್ಡಿ ಸಾಲ; ₹667 ಕೋಟಿ ಕಿಸಾನ್ ಸಮ್ಮಾನ್ ನಿಧಿ: ಸಬಲೀಕರಣಕ್ಕೆ ಒತ್ತು

ಆಲ್ವಾರ್: 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಗುರಿ ಸಾಧಿಸಲು ಯುವಕರು, ಬಡವರು, ರೈತರು ಹಾಗೂ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಅತ್ಯಂತ ಅಗತ್ಯ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ.

ರಾಜಸ್ಥಾನದ ಆಲ್ವಾರ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ರಾಜ್ಯದ 17 ಜಿಲ್ಲೆಗಳಲ್ಲಿ ₹6,453 ಕೋಟಿ ವೆಚ್ಚದ 954 ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.

ಆಲ್ವಾರ್‌ನಲ್ಲಿ ದಿನಕ್ಕೆ 3 ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಶಾ, ಬಳಿಕ ಇದರ ಸಾಮರ್ಥ್ಯವನ್ನು 5 ಲಕ್ಷ ಲೀಟರ್‌ಗೆ ಹೆಚ್ಚಿಸಲಾಗುವುದು ಎಂದರು. ಡೈರಿ ಮತ್ತು ಸಹಕಾರಿ ಕ್ಷೇತ್ರಗಳು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಜೊತೆಗೆ ಜಾನುವಾರು ಸಾಕಾಣಿಕೆದಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿವೆ ಎಂದು ಹೇಳಿದರು.

ಭಿಲ್ವಾರ, ಜೈಪುರ, ಪಾಲಿ ಮತ್ತು ರಾಜ್‌ಸಮಂದ್‌ನ ನಾಲ್ಕು ಸರಸ್ ಡೈರಿ ಘಟಕಗಳನ್ನು ₹274 ಕೋಟಿ ವೆಚ್ಚದಲ್ಲಿ ಉದ್ಘಾಟಿಸಲಾಯಿತು. ಫಲೋಡಿ, ಬಾಲೋತ್ರಾ, ದಿದ್ವಾನಾ-ಕುಚಾಮನ್ ಮತ್ತು ಪ್ರತಾಪ್‌ಗಢದಲ್ಲಿ ನಾಲ್ಕು ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಗೂ ಚಾಲನೆ ನೀಡಲಾಗಿದ್ದು, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾ ತಿಳಿಸಿದರು.

ಮುಖ್ಯಮಂತ್ರಿಗಳ ಬೆಳೆ ವಿಮಾ ಯೋಜನೆಯಡಿ ₹152 ಕೋಟಿ ಡಿಬಿಟಿ ಮೂಲಕ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ 67 ಲಕ್ಷ ರೈತರಿಗೆ ₹667 ಕೋಟಿಗೂ ಹೆಚ್ಚು ವಿತರಿಸಲಾಗಿದೆ ಎಂದರು.

ರಾಜಸ್ಥಾನದಲ್ಲಿ ಪ್ರಸ್ತುತ ಸುಮಾರು 44,000 ಸಹಕಾರಿ ಸಂಘಗಳಿದ್ದು, ಪ್ರತಿಯೊಂದು ಗ್ರಾಮಕ್ಕೂ ಸಹಕಾರಿ ಸಂಸ್ಥೆಯ ಸೌಲಭ್ಯ ತಲುಪಿಸುವ ಗುರಿ ಹೊಂದಲಾಗಿದೆ. 2026-27ರಲ್ಲಿ 50 ಹೊಸ ಗೋದಾಮುಗಳನ್ನು ನಿರ್ಮಿಸಲಾಗುವುದು ಎಂದು ಅಮಿತ್ ಶಾ ಹೇಳಿದರು.

Leave a Reply

Your email address will not be published. Required fields are marked *