‘ಸುದೃಷ್ಟಿ’ ಕಾರ್ಯಕ್ರಮ: ಕಣ್ಣಿನ ಪೊರೆ ರೋಗಿಗಳ ಆಸ್ಪತ್ರೆಗೆ ಪ್ರಯಾಣಕ್ಕೆ ಎರಡು ಎಸಿ ಬಸ್ ಒದಗಿಸಿದ ಯೂಸುಫ್ ಪಠಾಣ್

ಬೆರ್ಹಾಂಪೋರ್: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಕಣ್ಣಿನ ಪೊರೆ ರೋಗಿಗಳು ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಲು ಅನುಕೂಲವಾಗುವಂತೆ ಮಾಜಿ ಕ್ರಿಕೆಟಿಗ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದ ಯೂಸುಫ್ ಪಠಾಣ್ ಎರಡು ಹವಾನಿಯಂತ್ರಿತ (ಎಸಿ) ಬಸ್‌ಗಳನ್ನು ಒದಗಿಸಿದ್ದಾರೆ.

ಬೆರ್ಹಾಂಪೋರ್ ಕ್ಷೇತ್ರವನ್ನು ಪ್ರತಿನಿಧಿಸುವ ಪಠಾಣ್ ಮತ್ತು ಜಂಗಿಪುರ ಸಂಸದ ಖಲೀಲೂರ್ ರೆಹಮಾನ್ ಅವರ ಜಂಟಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಎಂಪಿಎಲ್‌ಎಡಿಎಸ್) ನಿಧಿಯಡಿ ‘ಸುದೃಷ್ಟಿ’ ಕಾರ್ಯಕ್ರಮಕ್ಕೆ ಈ ಬಸ್‌ಗಳನ್ನು ನೀಡಲಾಗಿದೆ.

ಜಿಲ್ಲೆಯ ವಿವಿಧ ಬ್ಲಾಕ್‌ಗಳಿಂದ ಕಣ್ಣಿನ ಪೊರೆ ರೋಗಿಗಳನ್ನು ಉಪವಿಭಾಗೀಯ ಆಸ್ಪತ್ರೆಗಳಿಗೆ ಕರೆದೊಯ್ಯಲು ಹಾಗೂ ಶಸ್ತ್ರಚಿಕಿತ್ಸೆ ಬಳಿಕ ಗ್ರಾಮೀಣ ಆಸ್ಪತ್ರೆಗಳು ಅಥವಾ ಬ್ಲಾಕ್ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮರಳಿ ತಲುಪಿಸಲು ಬಸ್‌ಗಳು ನೆರವಾಗಲಿವೆ ಎಂದು ಪಠಾಣ್ ತಿಳಿಸಿದ್ದಾರೆ.

ಇದೇ ವೇಳೆ, ನೌಡಾ ಪ್ರದೇಶದ ಅಂಗವಿಕಲರಿಗೆ ತಮ್ಮ ಎಂಪಿಎಲ್‌ಎಡಿಎಸ್ ನಿಧಿಯಿಂದ 100 ವೀಲ್‌ಚೇರ್‌ಗಳನ್ನು ವಿತರಿಸಿರುವುದಾಗಿಯೂ ಅವರು ಹೇಳಿದ್ದಾರೆ.

ವೃದ್ಧರು ಮತ್ತು ಆರ್ಥಿಕವಾಗಿ ಹಿಂದುಳಿದ ರೋಗಿಗಳು ಸಾರಿಗೆ ಸಮಸ್ಯೆಯಿಂದ ವೈದ್ಯಕೀಯ ಸೇವೆ ಪಡೆಯುವುದನ್ನು ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ಆರೋಗ್ಯ ಮೂಲಸೌಕರ್ಯ ಬಲಪಡಿಸುವುದು ಹಾಗೂ ವೈದ್ಯಕೀಯ ಸೇವೆಗಳನ್ನು ಜನರಿಗೆ ಸುಲಭವಾಗಿ ತಲುಪಿಸುವುದು ಉಪಕ್ರಮಗಳ ಗುರಿಯಾಗಿದೆ ಎಂದು ಪಠಾಣ್ ತಿಳಿಸಿದ್ದಾರೆ.