ಕರ್ನಾಟಕದ 2ನೇ ಅಧಿಕೃತ ಆಡಳಿತ ಭಾಷೆಯಾಗಿ ತುಳು; ಸರ್ಕಾರಕ್ಕೆ ದೆಹಲಿ ತುಳುಸಿರಿ ಅಭಿನಂದನೆ

ನವದೆಹಲಿ:  ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಆಡಳಿತ ಭಾಷೆಯನ್ನಾಗಿ ಮಾಡುವ ಕುರಿತು ರಾಜ್ಯ ಸರ್ಕಾರ ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವುದಕ್ಕೆ ದೆಹಲಿ ತುಳುಸಿರಿ ಅಭಿನಂದನೆ ಸಲ್ಲಿಸಿದೆ.

ಕರ್ನಾಟಕದ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ಹಲವು ವರ್ಷಗಳಿಂದ ತುಳುವರು ಮುಂದಿಡುತ್ತಿದ್ದು, ಸರ್ಕಾರದ ನಿರ್ಧಾರ ಸಂತಸ ತಂದಿದೆ ಎಂದು ದೆಹಲಿ ತುಳುಸಿರಿ ಅಧ್ಯಕ್ಷ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ವಸಂತ ಶೆಟ್ಟಿ ಬೆಳ್ಳಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತುಳುವನ್ನು ರಾಜ್ಯದ ಎರಡನೇ ಅಧಿಕೃತ ಆಡಳಿತ ಭಾಷೆಯನ್ನಾಗಿ ಘೋಷಿಸುವಂತೆ ದೆಹಲಿ ತುಳುಸಿರಿ ವತಿಯಿಂದ ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷವೂ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಸೇರಿಸಿತ್ತು. ಇದೀಗ ಸರ್ಕಾರ ತನ್ನ ಪ್ರಣಾಳಿಕೆ ಭರವಸೆಯಂತೆ ಕ್ರಮ ಕೈಗೊಂಡಿರುವುದು ತುಳುನಾಡಿನ ಜನತೆಗೆ ಮಹತ್ವದ ಕ್ಷಣ ಎಂದು ಅವರು ಹೇಳಿದ್ದಾರೆ.

ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಕ್ರಿಯೆಗೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಪ್ರಮುಖ ಹೆಜ್ಜೆಯಾಗಲಿದೆ ಎಂಬ ವಿಚಾರವನ್ನು ದೆಹಲಿ ತುಳುಸಿರಿಯು ಈ ಹಿಂದೆ ಸರ್ಕಾರದ ಗಮನಕ್ಕೆ ತಂದಿತ್ತು. ಈ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಿದ ಪ್ರೊ. ರಾಧಾಕೃಷ್ಣ ಅವರಿಗೆ ಸಂಘಟನೆ ಕೃತಜ್ಞತೆ ಸಲ್ಲಿಸಿದೆ.

Vasanth Shetty Bellare

ಕಾಂಗ್ರೆಸ್ ಪ್ರಣಾಳಿಕೆ ಸಮಿತಿಯ ಅಂದಿನ ಉಪಾಧ್ಯಕ್ಷರಾಗಿದ್ದ ಪ್ರೊ. ರಾಧಾಕೃಷ್ಣ, ಸಮಿತಿ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್ ಸೇರಿದಂತೆ ಈ ಪ್ರಕ್ರಿಯೆಗೆ ಸಹಕರಿಸಿದ ಎಲ್ಲರಿಗೂ ದೆಹಲಿ ತುಳುಸಿರಿ ಕೃತಜ್ಞತೆ ಸಲ್ಲಿಸಿದೆ.

ಸರ್ಕಾರದ ಸಚಿವ ಸಂಪುಟ, ಕರಾವಳಿಯ ಶಾಸಕರು, ಸಂಸದರು ಹಾಗೂ ತುಳು ಭಾಷೆಗಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಸೇರಿದಂತೆ ಪ್ರಮುಖರನ್ನು ದೆಹಲಿಯಲ್ಲಿರುವ ತುಳು ಸಮುದಾಯದ ವತಿಯಿಂದ ಅಭಿನಂದಿಸಲಾಗುವುದು ಎಂದು ತಿಳಿಸಲಾಗಿದೆ.

ತುಳು ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ದೆಹಲಿ ತುಳುಸಿರಿ ಸುಮಾರು ಮೂರು ದಶಕಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನವೂ ಮುಂದುವರಿಯಲಿದೆ ಎಂದು ವಸಂತ ಶೆಟ್ಟಿ ಬೆಳ್ಳಾರೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *