ಹಾರ್ಮುಜ್‌ನಲ್ಲಿ ಇರಾನ್‌ ರಣಕಹಳೆ: 20ಕ್ಕೂ ಹೆಚ್ಚು ಹಡಗುಗಳಿಗೆ ಗುರಿ!

ಟೆಹ್ರಾನ್: ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಜಲಸಂಧಿ ಮೂಲಕ ಸಂಚರಿಸಲು ಮುಂದಾದ 20ಕ್ಕೂ ಹೆಚ್ಚು ವಾಣಿಜ್ಯ ಹಡಗುಗಳನ್ನು ಇರಾನ್‌ ಗುರಿಯಾಗಿಸಿಕೊಂಡಿದೆ ಎನ್ನಲಾಗಿದ್ದು, ಜಾಗತಿಕ ಇಂಧನ ಪೂರೈಕೆ ಕುರಿತು ಆತಂಕ ಹೆಚ್ಚಾಗಿದೆ.

ಇದರ ಬೆನ್ನಲ್ಲೇ ಇರಾನ್‌ ಹಾರ್ಮುಜ್ ಜಲಸಂಧಿ ಮಾತ್ರವಲ್ಲದೆ ಗಲ್ಫ್ ಆಫ್ ಓಮನ್‌ ಹಾಗೂ ಅರಬ್ಬಿ ಸಮುದ್ರದ ಕೆಲವು ಭಾಗಗಳಿಗೂ ತನ್ನ ‘ನೋ-ಗೋ ಝೋನ್‌’ ವಿಸ್ತರಿಸಿದೆ. ನಿರ್ಬಂಧಿತ ಪ್ರದೇಶಕ್ಕೆ ಪೂರ್ವಾನುಮತಿ ಇಲ್ಲದೆ ಪ್ರವೇಶಿಸುವ ಹಡಗುಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಇರಾನ್‌ ಎಚ್ಚರಿಕೆ ನೀಡಿದೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ (IRGC) ಪ್ರಕಾರ, ಸೂಚನೆಗಳನ್ನು ಪಾಲಿಸದೆ ಸಾಗಲು ಯತ್ನಿಸಿದ ಎರಡು ಅಮೆರಿಕದ ಹಡಗುಗಳು, ಎಂಟು ತೈಲ ಟ್ಯಾಂಕರ್‌ಗಳು ಸೇರಿದಂತೆ 20ಕ್ಕೂ ಹೆಚ್ಚು ಹಡಗುಗಳನ್ನು ಗುರಿಯಾಗಿಸಲಾಗಿದೆ. ನಿರ್ಬಂಧಿತ ವಲಯ ಪ್ರವೇಶಿಸುವ ಮುನ್ನ ಇರಾನ್‌ನೊಂದಿಗೆ ಸಮನ್ವಯ ಸಾಧಿಸಬೇಕು ಎಂದು IRGC ವಕ್ತಾರ ಹುಸೇನ್ ಮೊಹೆಬ್ಬಿ ಹೇಳಿದ್ದಾರೆ.

ತೈಲ ಬೆಲೆ ಗಗನಕ್ಕೆ

ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ಬೀರಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 101.21 ಡಾಲರ್‌ಗೆ ಏರಿಕೆಯಾಗಿದೆ.

ವಿಶ್ವದ ತೈಲ ಹಾಗೂ ದ್ರವೀಕೃತ ನೈಸರ್ಗಿಕ ಅನಿಲದ ಸುಮಾರು ಐದನೇ ಒಂದು ಭಾಗ ಸಾಮಾನ್ಯವಾಗಿ ಹಾರ್ಮುಜ್ ಜಲಸಂಧಿ ಮೂಲಕ ಸಾಗುತ್ತದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿಯಾದರೆ ಜಾಗತಿಕ ಇಂಧನ ಪೂರೈಕೆ ಮತ್ತು ಸಾಗಣೆ ವ್ಯವಸ್ಥೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದೇ ವೇಳೆ, ಗಲ್ಫ್ ಆಫ್ ಓಮನ್‌ ಹಾಗೂ ಗಲ್ಫ್ ಪ್ರದೇಶದಲ್ಲಿ ಹಲವು ಹಡಗುಗಳ ಮೇಲೆ ಗುಂಡಿನ ದಾಳಿ ನಡೆದಿರುವ ಬಗ್ಗೆ ಯುಕೆಎಂಟಿಒ ಮಾಹಿತಿ ನೀಡಿದೆ.

ಅಮೆರಿಕದ ನೆಲೆಯ ಮೇಲೂ ದಾಳಿ?

ಈ ನಡುವೆ, ಅಮೆರಿಕದ ಕಾರ್ಯಾಚರಣೆಗೆ ಪ್ರತೀಕಾರವಾಗಿ ಜೋರ್ಡಾನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ದಾಳಿ ನಡೆಸಿರುವುದಾಗಿ ಇರಾನ್‌ ಹೇಳಿಕೊಂಡಿದೆ. ಇರಾನ್‌ನ ಐದು ತೈಲ ಟ್ಯಾಂಕರ್‌ಗಳನ್ನು ನಾಶಪಡಿಸಿದ ಅಮೆರಿಕದ ಕಾರ್ಯಾಚರಣೆಗೆ ಪ್ರತಿಯಾಗಿ ಈ ದಾಳಿ ನಡೆದಿದೆ ಎಂದು ತಿಳಿಸಿದೆ.

ಇರಾನ್‌ನಿಂದ ಜೋರ್ಡಾನ್‌ ಕಡೆಗೆ 18 ಕ್ಷಿಪಣಿಗಳನ್ನು ಉಡಾಯಿಸಲಾಗಿದ್ದು, ಅವುಗಳನ್ನು ತಡೆದುಹಾಕಲಾಗಿದೆ ಎಂದು ಜೋರ್ಡಾನ್‌ ಸೇನೆ ಹೇಳಿದೆ.

ಹಾರ್ಮುಜ್‌ ಸುತ್ತಲಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ತೈಲ ಬೆಲೆ, ಸಾಗಣೆ ವೆಚ್ಚ ಹಾಗೂ ಇಂಧನ ಪೂರೈಕೆ ಮೇಲೆ ಪರಿಣಾಮ ಬೀರುವ ಆತಂಕ ಹೆಚ್ಚಾಗಿದೆ.

Leave a Reply

Your email address will not be published. Required fields are marked *